ದಾಂಡೀ ಯಾತ್ರೆ -
ಭಾರತೀಯ ಸ್ವಾತಂತ್ರ್ಯ ಹೋರಾಟದ ಅಂಗವಾಗಿ, 1930ರಲ್ಲಿ ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ನಡೆದ ಒಂದು ಯಾತ್ರೆ. ಉಪ್ಪಿನ ಸತ್ಯಾಗ್ರಹ ಎಂದೂ ಪ್ರಸಿದ್ಧವಾಗಿದೆ.

	ದಾಂಡೀ ಗುಜರಾತಿನ ಕರಾವಳಿಯ ಒಂದು ಸ್ಥಳ. ಅದಕ್ಕೂ ಗಾಂಧಿಯವರು ಇದ್ದ ಸಾಬರಮತಿಯ ಸತ್ಯಾಗ್ರಹ ಆಶ್ರಮಕ್ಕೂ ಸುಮಾರು 240 ಮೈ ದೂರ. ಗಾಂಧೀಜಿ 1930ರ ಮಾರ್ಚ್ ತಿಂಗಳು 12ರಂದು ಬುಧವಾರ ಪ್ರಾತಃ ಕಾಲ 6-70ಕ್ಕೆ ಸತ್ಯಾಗ್ರಹಾಶ್ರಮದಿಂದ ದಾಂಡಿಗೆ ಯಾತ್ರೆ ಹೊರಟರು. ಅವರೊಡನೆ ಸತ್ಯಾಗ್ರಹ ತಂತ್ರದಲ್ಲಿ ತರಬೇತು ಹೊಂದಿದ್ದ ಆಶ್ರಮದ 78 ಮಂದಿ ಕಾರ್ಯಕರ್ತರು ನಡೆದರು. ಸರ್ಕಾರ ಮಾಡಿದ್ದ ಉಪ್ಪಿನ ಶಾಸನವನ್ನು ಶಾಂತರೀತಿಯಲ್ಲಿ ಉಲ್ಲಂಘಿಸುವುದು ಅವರ ಉದ್ದೇಶ. ಇದು ಬಹಳ ಸಣ್ಣ ವಿಷಯವೆಂಬಂತೆ ಕಂಡುಬಂದರೂ ಗಾಂಧೀಜಿಯ ನಾಯಕತ್ವ ಅವರ ಪವಿತ್ರ ಸಂಕಲ್ಪ ಮತ್ತು ಅಚಲ ನಿರ್ಧಾರದಿಂದ ಇದು ಒಂದು ಯಾತ್ರೆ ಎನಿಸಿತು. ಇದು ಅಮರನಾಥ ಅಥವಾ ಕೇದಾರ ಬದರಿಗಳಲ್ಲಿ ಕೈಗೊಂಡ ಪವಿತ್ರಯಾತ್ರೆಯಂತೆ-ಎಂದು ಗಾಂಧೀಜಿಯವರೇ ನುಡಿದಿದ್ದರು. ಗಾಂಧೀಜಿ ಇಂಥ ಕಾರ್ಯಕ್ರಮ ಕೈಗೊಳ್ಳುವರೆಂದು ಕೇಳಿದಾಗ ದೆಹಲಿಯ ಸರ್ಕಾರಿ ವರಿಷ್ಠರ ವಲಯ ಅಪಹಾಸ್ಯ ಮಾಡಿತು. ಕಾಂಗ್ರೆಸಿನ ಅನೇಕ ಕಾರ್ಯಕರ್ತರಲ್ಲೂ ಸಂದೇಹವೇ ಮೂಡಿತ್ತು. ಇದರಿಂದ ಬ್ರಿಟಿಷ್ ಸರ್ಕಾರದ ಮೇಲೆ ಯಾವ ಪ್ರಭಾವವೂ ಆಗಲಾರದೆಂಬುದು ಅನೇಕ ರಾಜಕೀಯ ಮುತ್ಸದ್ಧಿಗಳ ಅಭಿಪ್ರಾಯವಾಗಿತ್ತು.

	ಯಾತ್ರೆಯಲ್ಲಿ ರಾಷ್ಟ್ರದ ಬಹುತೇಕ ಪ್ರಾಂತ್ಯಗಳ ಸತ್ಯಾಗ್ರಹಿಗಳು ಭಾಗವಹಿಸಿದ್ದರು. ಎಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯರೆಂದರೆ ಗಾಂಧೀಜಿಯೇ; ಅವರಿಗೆ 61 ವರ್ಷವಾಗಿತ್ತು. ಅತ್ಯಂತ ಕಿರಿಯ ಸತ್ಯಾಗ್ರಹಿಯ ವಯಸ್ಸು 6 ವರ್ಷ. ಅವರಲ್ಲಿ ಯಾವ ಬಗೆಯ ಶಸ್ತ್ರಾಸ್ತ್ರಗಳು ಇರಲಿಲ್ಲ. ಭಕ್ತಿಗೀತೆಗಳನ್ನು ಹಾಡಲು ಭಜನೆ ಮಾಡಲು ಶ್ರುತಿಗಾಗಿ ಇದ್ದ ತಂಬೂರಿಯೊಂದೇ ಅವರ ಸಾಧನ. ಅವರ ಹೃದಯಗಳಲ್ಲಿ ಒಲವು ತುಂಬಿತ್ತು. ಸರ್ಕಾರದ ಬಗ್ಗೆ ಸ್ವಲ್ಪವೂ ವೈರಭಾವ ಇರಲಿಲ್ಲ. ಇಂಥ ಶುದ್ಧ ಅಹಿಂಸಕ ತಂತ್ರವನ್ನು ಗಾಂಧೀಜಿ ಅಣಿಗೊಳಿಸಿದ್ದರು.

	ಇದಕ್ಕೆ ಹಿಂದೆ, 1920ರ ಡಿಸೆಂಬರ್ ಕೊನೆಯಲ್ಲಿ ಲಾಹೋರ್ ಬಳಿ, ರಾವೀ ನದಿಯ ದಂಡೆಯ ಮೇಲೆ ಅಖಿಲ ಭಾರತದ ಕಾಂಗ್ರೆಸ್ ಅಧಿವೇಶನ ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. 31ರಂದು ಮಧ್ಯರಾತ್ರಿಯಲ್ಲಿ ಅಧಿವೇಶನ ಪೂರ್ಣ ಸ್ವರಾಜ್ಯದ ಗುರಿಯನ್ನು ಘೋಷಿಸಿತು; ರಾಷ್ಟ್ರದ ಪರಿಸ್ಥಿತಿಯನ್ನು ಪರಿಶೀಲಿಸಿ, ಯಾವಾಗ ಹೇಗೆ ಸತ್ಯಾಗ್ರಹ ನಡೆಸಬಹುದೆಂಬ ಪೂರ್ಣ ಅಧಿಕಾರವನ್ನು ಗಾಂಧೀಜಿಗೆ ನೀಡಿತು.

	ಇದಕ್ಕೂ ಕೆಲವು ತಿಂಗಳುಗಳ ಹಿಂದಿನಿಂದಲೇ ದೇಶಾದ್ಯಾಂತ ಘೋರ ಪರಿಸ್ಥಿತಿ ಉದ್ಭವಿಸಿತ್ತು. ಆರ್ಥಿಕ ಹಿಂಜರಿತದಿಂದ ರೈತರ ಮತ್ತು ಗಿರಣಿ ಕಾರ್ಮಿಕರ ಜೀವನ ದುರ್ಭರವಾಗಿತ್ತು. ಮುಂಬಯಿ ಮತ್ತು ಬಂಗಾಲ ಪ್ರಾಂತ್ಯಗಳಲ್ಲಿ ಪ್ರಚಂಡ ಕಾರ್ಮಿಕ ಮುಷ್ಕರಗಳು ನಡೆದಿದ್ದುವು. ಬಂಗಾಲ, ಸಂಯುಕ್ತ ಪ್ರಾಂತ್ಯಗಳು (ಈಗಿನ ಉತ್ತರ ಪ್ರದೇಶ), ಪಂಜಾಬ್ ಮುಂತಾದ ಕಡೆ ಕ್ರಾಂತಿಕಾರಿ ಯುವಕರು ಬಾಂಬ್ ಸ್ಫೋಟವೇ ಮುಂತಾದ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದರು. ಅನೇಕ ಮಂದಿ ರಾಷ್ಟ್ರಪ್ರೇಮಿಗಳು ಬಂಧಿತರಾಗಿ ಸೆರೆಮನೆಯಲ್ಲಿ ಇದ್ದರು. ಸರ್ಕಾರ ಕ್ರೂರ ದಮನನೀತಿ ಅನುಸರಿಸಿತ್ತು. ಸುಗ್ರೀವಾಜ್ಞೆಗಳು ಜಾರಿಗೆ ಬಂದಿದ್ದವು. ಗಾಂಧೀಜಿ, ಮೋತಿಲಾಲ ನೆಹರೂ, ವಿಠಲಬಾಯಿ ಪಟೇಲ್, ತೇಜ್ ಬಹಾದೂರ್, ಸಪ್ರೂ ಮುಂತಾದ ನಾಯಕರು ಚರ್ಚಿಸಿ ಮಂಡಿಸಿದ ಸಾಮ್ರಾಜ್ಯಾಂತರ್ಗತ ಸ್ವರಾಜ್ಯದ ಬೇಡಿಕೆಗೆ ವೈಸ್‍ರಾಯ್ ಯಾವ ತೀರ್ಮಾನವನ್ನೂ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಇದನ್ನೆಲ್ಲ ಗಮನಿಸಿದ ಗಾಂಧಿಯರು ಸರ್ಕಾರದ ಹಿಂಸಾಯುತ ದಬ್ಬಾಳಿಕೆಯ ವಿರುದ್ಧ ಸತ್ಯಾಗ್ರಹ ಅನಿವಾರ್ಯವೆಂಬ ತೀರ್ಮಾನಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿಯೇ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಆ ಮಹತ್ವ ಪೂರ್ಣ ನಿರ್ಣಯ ಆಗಿದ್ದುದು.

	ನಾಯಕರಾದ ಗಾಂಧೀಜಿ ಯಾವ ಬಗೆಯ ಸತ್ಯಾಗ್ರಹ ಮಾಡಬೇಕೆಂದು ತೀವ್ರವಾಗಿ ಯೊಚಿಸುತ್ತಿದ್ದರು. ರಾಷ್ಟ್ರದ ಒಲವು ಎತ್ತ ಇದೆ ಎಂಬುದನ್ನು ಪರೀಕ್ಷಿಸಲು ಪ್ರಥಮ ಹೆಜ್ಜೆಯಾಗಿ, ಜನವರಿ 26ರಂದು ಸ್ವಾತಂತ್ರ್ಯ ದಿನಾಚರಣೆ ನಡೆಸಬೇಕೆಂದು ಆದೇಶ ನೀಡಿದರು. ಇದು ರಾಷ್ಟ್ರದ ಅದಮ್ಯ ಸತ್ತ್ವವನ್ನು ಬಡಿದೆಬ್ಬಿಸಿತು. ಇದನ್ನು ಕಂಡ ಗಾಂಧೀಜಿ ವೈಸರಾಯ್‍ಗೆ ಒಂದು ಪತ್ರ ಬರೆದು, ಹನ್ನೊಂದು ಅಂಶಗಳ ಪರಿಹಾರ ಸೂತ್ರವನ್ನು ಸೂಚಿಸಿದರು. ಉಪ್ಪಿನ ಮೇಲಿನ ತೆರಿಗೆಯನ್ನು ರದ್ದುಮಾಡಬೇಕೆಂಬ ಅಂಶವೂ ಅದರಲ್ಲಿ ಸೇರಿತ್ತು. ಇದಕ್ಕೆ ಕ್ರಮ ಕೈಗೊಳ್ಳದಿದ್ದರೆ ಸತ್ಯಾಗ್ರಹ ಅನಿವಾರ್ಯವೆಂದೂ ಸೂಚಿಸಿದರು.

	ವೈಸರಾಯ್ ಬರೆದ ಉತ್ತರ ತಿರಸ್ಕಾರ ಭಾವದಿಂದ ಕೂಡಿತ್ತು. ಗಾಂಧೀಜಿ ಉಪ್ಪಿನ ಶಾಸನಭಂಗದ ಯೋಚನೆಯನ್ನು ಘೋಷಿಸಿದರು. ದಾಂಡೀ ಸಮುದ್ರ ತೀರಕ್ಕೆ ಹೋಗಿ, ಉಪ್ಪನ್ನು ತಯಾರಿಸುವುದು, ಸರ್ಕಾರದ ಉಪ್ಪಿನ ಕೋಠಿಗಳ ಮೇಲೆ ದಾಳಿ ಮಾಡುವುದು-ಇದು ಕಾರ್ಯಕ್ರಮ. ಪ್ರಕೃತಿದತ್ತವಾದ, ಮನುಷ್ಯನಿಗೆ ಅತ್ಯಾವಶ್ಯಕವಾದ ಉಪ್ಪಿನ ಮೇಲೆ ಕರ ಹೇರುವುದು ಮಹಾ ಅನ್ಯಾಯವೆಂಬುದು ಅವರ ವಾದ. ಇದಕ್ಕೆ ಅನುಗುಣವಾಗಿಯೇ ದಾಂಢೀ ಯಾತ್ರೆ ರೂಪುಗೊಂಡಿತು; ಆರಂಭವೂ ಆಯಿತು.

	ಯಾತ್ರೆ ಮುಂದುವರಿದಂತೆ ಅದೊಂದು ಪ್ರಚಂಡ ಜನಶಕ್ತಿಯ ಸ್ಫೋಟದಂತೆ ಕಂಡುಬಂತು. ಆ ಅಸಾಮಾನ್ಯ ನಾಯಕನ ಹಿಂದೆ ಸಹಸ್ರಾರು ಜನ ಮಹಾಪೂರದಂತೆ ನಡೆದರು. ದಾರಿಯುದ್ಧಕ್ಕೂ ದೊರೆತ ಸ್ವಾಗತ ಉತ್ಸಾಹ ಅವರ್ಣನೀಯ. ಕವಯತ್ರಿ ಸರೋಜಿನೀದೇವಿಯವರೂ ಯಾತ್ರೆಯಲ್ಲಿ ಪಾಲುಗೊಂಡಿದ್ದರು. 400 ಗ್ರಾಮಗಳ ಪಟೇಲರು ತಮ್ಮ ಅಧಿಕಾರ ಸ್ಥಾನಗಳಿಗೆ ರಾಜೀನಾಮೆ ಇತ್ತರು. ಇಂಥ ಅಪೂರ್ವ ಯಾತ್ರೆಯ ಪ್ರಭಾವದಿಂದ ಹೊಸ ಸ್ಫೂರ್ತಿ ಉಕ್ಕಿ ಹರಿಯಿತು.

	ಏಪ್ರಿಲ್ 5ರಂದು ಗಾಂಧೀಜಿ ದಾಂಡೀ ಸಮುದ್ರತೀರ ಸೇರಿ ಕರಾಡಿ ಎಂಬಲ್ಲಿ ಬಿಡಾರ ಮಾಡಿದರು. ಏಪ್ರಿಲ್ 6 ರಂದು ಗಾಂಧೀಜಿಯವರಿಂದ ಶಾಸನೋಲ್ಲಂಘನೆಯಾಯಿತು. ರಾಷ್ಟ್ರದಲ್ಲಿ ಎಲ್ಲೆಲ್ಲೂ ಶಾಸನೋಲ್ಲಂಘನೆಗಳಾದವು. ಮೇ 4 ರಂದು ಮಧ್ಯರಾತ್ರಿ ಸರ್ಕಾರ ಗಾಂಧೀಜಿಯನ್ನು ಬಂಧಿಸಿತು. ಆಂದೋಲನದ ಕಾವು ಇನ್ನೂ ಏರಿತು. ಬಂಧಿತ ಸತ್ಯಾಗ್ರಹಿಗಳ ಸಂಖ್ಯೆ ಒಂದು ಲಕ್ಷವನ್ನೂ ಮೀರಿತು.

	ಅನಂತರ ಸರೋಜನೀದೇವಿ ಮತ್ತು ಅಬ್ಬಾಸ್ ತಯ್ಯಬ್ಜಿ ಅವರ ನಾಯಕತ್ವದಲ್ಲಿ ಧಾರಾಶನದ ಸರ್ಕಾರಿ ಉಪ್ಪಿನ ಕೋಠಿಯ ಮೇಲೆ ಸತ್ಯಾಗ್ರಹಿಗಳ ಶಾಂತಿಯುತ ದಾಳಿ ನಡೆಯಿತು. ಶಸ್ತ್ರಸಜ್ಜಿತ ಪೋಲೀಸರ ದೌರ್ಜನ್ಯದ ಪ್ರತಿವರ್ತನೆ ತೀವ್ರವಾಗಿತ್ತು. ದಾಂಡೀಯಾತ್ರೆ ಇಡೀ ನಾಗರಿಕ ಜಗತ್ತಿನ ಗಮನ ಸೆಳೆಯಿತು. ಇದು ಭಾರತ ಮತ್ತು ಬ್ರಿಟನ್ನಿನ ಸಂಬಂಧಕ್ಕೆ ಹೊಸ ತಿರುವನ್ನು ನೀಡಿತು. 1931ರ ಜನವರಿ 26ರಂದು ಗಾಂಧೀಜಿಯ ಬಿಡುಗಡೆ ಆಯಿತು. ಫೆಬ್ರವರಿ 27ರಂದು ವೈಸ್‍ರಾಯ್ ಅರ್ವಿನರ ಆಹ್ವಾನದ ಮೇಲೆ ಗಾಂಧೀ-ಅರ್ವಿನ್ ಭೇಟಿಯಾಯಿತು. ಅವರ ಮಾತುಕತೆಗಳ ಪರಿಣಾಮವಾಗಿ ಗಾಂಧೀ-ಅರ್ವಿನ್ ಒಪ್ಪಂದ ಆಯಿತು. ಇದರ ಪ್ರಕಾರ ಗಾಂಧೀಜಿ ಲಂಡನ್ನಿನಲ್ಲಿ ನಡೆಯುತ್ತಿದ್ದ ದುಂಡುಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸಿನ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಲು ತೆರಳಿದರು. ಭಾರತ ಮತ್ತು ಬ್ರಿಟನ್‍ಗಳ ರಾಜಕೀಯ ಸಂಬಂಧದಲ್ಲಿ ನೂತನ ಅಧ್ಯಾಯವೊಂದು ಆರಂಭವಾಯಿತು.
(ಜಿ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ